(((ಜೇನು ಕುತೂಹಲ -1 🐝)))
ರಾಣಿ ಜೇನು– ಒಮ್ಮೆ ಮಿಲನ, ಜೀವನದುದ್ದಕ್ಕೂ ಮೊಟ್ಟೆ ಇಡುವ ಸಾಮರ್ಥ್ಯ.
ಜೇನು ಕುಟುಂಬದಲ್ಲಿ ಕೆಲಸಗಾರರು ಸಾವಿರಾರು (Worker Bee). ಆದರೆ ವಂಶಾಭಿವೃದ್ಧಿಗಾಗಿ ಗಂಡಸರ ಸಂಖ್ಯೆ ನೂರರ ಆಸುಪಾಸು (Drone Bee). ಮಹಾರಾಣಿ ಒಬ್ಬಳೇ (Queen Bee).
ರಾಣಿ ಜೇನು ನೊಣದ ಆಯಸ್ಸು ಸುಮಾರು 3 ರಿಂದ ಮೂರುವರೆ ವರ್ಷ. ಕ್ವೀನ್ ದೇಹದ ಗಾತ್ರ ಕೆಲಸಗಾರ ನೊಣಕ್ಕಿಂತ ಸ್ವಲ್ಪ ದೊಡ್ಡದು. ಈಕೆಗೆ ಕೆಲಸಗಾರ ನೊಣದಂತೆ ಮಧುಕೋಶ, ರಾಜಶಾಹಿರಸಗ್ರಂಥಿ, ಪರಾಗಬುಟ್ಟಿ ಇಲ್ಲ. ಹೊಟ್ಟೆ ಭಾಗ ಸ್ವಲ್ಪ ಉದ್ದ.
ರಾಣಿಯ ಹಾರಾಟ ಗಂಡುನೊಣದೊಂದಿಗೆ ಮಿಲನಕ್ಕಾಗಿ ಮಾತ್ರ. ಮತ್ತೆ ಗೂಡಿನಿಂದ ಹೊರಹೋಗುವುದಿಲ್ಲ. ದೊಡ್ಡ ಹೊಟ್ಟೆಯನ್ನು ಎತ್ತಿಕೊಂಡು ಹೋಗುವುದು ಈಕೆಗೆ ಕಷ್ಟ. ಮನೆಯಲ್ಲಿ ಜನ ಜಾಸ್ತಿಯಾದರೆ, ಸ್ಥಳೀಯವಾಗಿ ಮಕರಂದದೂಟ ಸಿಗದಿದ್ದರೆ, ಗೂಡಿಗೆ ಇನ್ಯಾರದ್ದೋ ಹಾವಳಿ ಜಾಸ್ತಿಯಾದಾಗ ಕೆಲಸಗಾರರ ಒತ್ತಡಕ್ಕೆ ಮಣಿದು ಹೊಸ ಮನೆ ಹುಡುಕಿ ಹಾರಾಡುವುದುಂಟು.
ಕೆಲಸಗಾರರು ತಂದು ಇಟ್ಟದ್ದನ್ನು, ಬಾಯಿಗೆ ಕೊಟ್ಟದನ್ನು ತಿನ್ನುವುದು, ಮೊಟ್ಟೆ ಇಡುವುದು ಕೆಲಸ. ಈಕೆಯ ಮೈ ಉಜ್ಜಲು, ಮೊಟ್ಟೆ ಇಡುವುದಕ್ಕಾಗಿ ವ್ಯವಸ್ಥೆ ಮಾಡಿಕೊಡಲು, ಮಕ್ಕಳನ್ನು ನೋಡಿಕೊಳ್ಳಲು ಸುಮಾರು ಜನ ಕೆಲಸಗಾರರು ಸಿದ್ಧ.
ರಾಣಿ ಗಂಡುನೊಣದೊಂದಿಗೆ ಮಿಲನವಾಗುವುದು ಜೀವನದಲ್ಲಿ ಒಮ್ಮೆ ಮಾತ್ರ. ಈ ವೇಳೆ ಗರ್ಭಾಶಯದಲ್ಲಿ 15-20 ಲಕ್ಷ ವೀರ್ಯಾಣುಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಮಿಲನ ಕಾರ್ಯ ಆಕಾಶದಲ್ಲಿ. ಒಂದು ಅಥವಾ ಹೆಚ್ಚು ಗಂಡು ನೊಣದೊಂದಿಗೆ ಸೇರುತ್ತದೆ. ಬಳಿಕ ದಿನಕ್ಕೆ ಸಾವಿರ ಮೊಟ್ಟೆ ಇಡುವ ಸಾಮರ್ಥ್ಯವನ್ನು ಕ್ವೀನ್ ಪಡೆಯುತ್ತದೆ.
ರಾಣಿ ದೇಹದಲ್ಲಿ ಸುಮಾರು 40 ಬಗೆಯ ರಾಸಾಯನಿಕ ಪೆರಮೋನ್/ ವಸ್ತುಸಾರ ಉತ್ಪಾದನೆ ಆಗುವುದು. ಎಲ್ಲರನ್ನು ಒಗ್ಗಟ್ಟಿನಲ್ಲಿ ಇಟ್ಟುಕೊಳ್ಳಲು, ಜೇನು ತರುವ ಕಾರ್ಯಕ್ಕೆಂದು ಹೊರ ಹೋದ ಕೆಲಸಗಾರರು ಮತ್ತೆ ಅದೇ ಮನೆಗೆ ಸೇರಲು ಪೆರಮೋನ್ ಕಾರಣ. ಒಂದು ವೇಳೆ ರಾಣಿ ವಯಸ್ಸಿನ ಕಾರಣದಿಂದಲೋ, ಅನಾರೋಗ್ಯದಿಂದಲೋ ವಸ್ತುಸಾರ ಹಂಚಲು ಅಸಮರ್ಥಳಾದರೆ, ಕೆಲಸಗಾರರು ರೊಚ್ಚಿಗೇಳಬಹುದು. ಈಕೆಯ ವಿರುದ್ಧ ಹಕ್ಕುಚ್ಯುತಿ ಮಂಡಿಸಿ ಆ ಸ್ಥಾನಕ್ಕೆ ಹೊಸ ರಾಣಿಯನ್ನು ಸೃಷ್ಟಿಸಲು ಪ್ರಯತ್ನ ಮಾಡಬಹುದು.
ಮುಂದುವರೆಯುದು………..
🐝🐝🐝🐝🐝🐝 Bee Bharath