ಜೇನು ಜೀವನ ಮಾಹಿತಿ ಮತ್ತು ವಂಶಾಭಿವೃದ್ಧಿ ಭಾಗ -2
ರಾಣಿ ಜೇನು ಹಿಂದೆ ಹೋದ ಗಂಡಿನ ಬದುಕಲ್ಲಿ ದುರಂತ
https://prakrithifoods.com/all-products-2/
ಜೇನು ಕುಟುಂಬದಲ್ಲಿ ಗುಂಡು ಗುಂಡಗಿರುವವನು ಗಂಡು. (Drone Bee). ಬಣ್ಣದಲ್ಲಿ ಕಪ್ಪು, ಬಲುಸಾಧು. ಚುಚ್ಚುವುದಿಲ್ಲ. ಯಾಕೆಂದರೆ ಈತನಿಗೆ ಚುಚ್ಚುವ ಮುಳ್ಳೇ ಇಲ್ಲ.
ರೆಕ್ಕೆಗಳು ಗಟ್ಟಿ ಮುಟ್ಟು, ಕಣ್ಣುಗಳು ಬಲು ಸೂಕ್ಷ್ಮ.
ಡ್ರೋನ್ ಜೀವನ ಬಿಂದಾಸ್. ತನ್ನ ಮನೆಯಲ್ಲದೆ ಬೇರೆ ಜೇನು ಕುಟುಂಬಕ್ಕೂ ಹೊಕ್ಕು ತಿಂದು ಬರಬಹುದು. ಯಾರೂ ತಡೆಯುವುದಿಲ್ಲ. ಆದರೆ ಕೆಲಸಗಾರ ನೊಣ ಬೇರೆ ಕುಟುಂಬದ ಹತ್ತಿರ ಹೋದ್ರೆ ಕಾವಲು ನಿಂತಿರುವವರು ಗುರ್ರೆನ್ನುತ್ತಾರೆ.
ಡ್ರೋನ್ ಗೆ ಮಧುಕೋಶ, ಕಾಲಿನಲ್ಲಿ ಪರಾಗ ತರುವ ಬುಟ್ಟಿ ವ್ಯವಸ್ಥೆ ಇಲ್ಲ. ಮಕರಂದ ಸಂಗ್ರಹಿಸುವ, ಗೂಡನ್ನು ಗುಡಿಸಿ ಸ್ವಚ್ಛಗೊಳಿಸುವ ಕೆಲಸವಿಲ್ಲ. ಕೆಲಸಗಾರರು(Worker Bees) ತಂದಿರಿಸಿದ್ದನ್ನು ತಿನ್ನುವುದು, ಸಂಜೆ ಗುಂಯ್ಯಿಂ.. ಅಂತ ವಿಹಾರಕ್ಕೆ ಹೋಗುವುದು.
ಹಾಗಾದರೆ ಗಂಡು ನೊಣದ ಕಾರ್ಯ ? ಸಂತಾನೋತ್ಪತ್ತಿ ಮಾತ್ರ.
ಪ್ರಕೃತಿಯಲ್ಲಿ ರಾಣಿನೊಣ ಮಿಲನಕ್ಕಾಗಿ ಹೊರಹೋದಾಗ ಅದನ್ನು ಒಂದಷ್ಟು ಡ್ರೋನ್ ಗಳು ಬೆನ್ನಟ್ಟುತ್ತವೆ. ಇವುಗಳ ರೆಕ್ಕೆ ಮತ್ತು ಕಣ್ಣುಗಳು ಪ್ರಬಲವಾಗಿರುವುದರಿಂದ ರಾಣಿಯನ್ನು ತೋಳತೆಕ್ಕೆಗೆ ಸೆಳೆಯುವುದು ಸುಲಭ.
ಆದರೆ ನಂತರ ನಡೆಯುವುದು ಘೋರ ದುರಂತ !
ರಾಣಿ ಜೇನಿನೊಂದಿಗೆ ಜೋಡಿಯಾದ ಗಂಡಿನ ಸಂಭ್ರಮ ಅಂತ್ಯವಾಗುವುದು ಸಾವಿನೊಂದಿಗೆ. ಜೋಡಿಯ ಬಳಿಕ ಗಂಡು ತನ್ನ ಜನನಾಂಗ ಕಳೆದುಕೊಳ್ಳುತ್ತದೆ. ಆಕೆಗೆ ದಿಬ್ಬಣದ ಹಾರಾಟ, ಈತನಿಗೆ ಕೈಲಾಸ ಯಾತ್ರೆ !
ಪರಿಸರದಲ್ಲಿ ಸಾಕಷ್ಟು ಆಹಾರ ಲಭ್ಯವಿರುವಾಗ ರಾಣಿಗೂ ನಿರಂತರ ಮೊಟ್ಟೆ ಇಡುವ ಹುರುಪು. ಇದೇ ವೇಳೆ ಕೆಲಸಗಾರ ಹುಳುಗಳು ದೊಡ್ಡ ಗಾತ್ರದ ಕಣಗಳನ್ನು ನಿರ್ಮಿಸಿಸಿ ಗಂಡು ಮೊಟ್ಟೆ ಇಡಲು ಪ್ರೇರಣೆ ನೀಡುತ್ತವೆ. ಇದು ಕುಟುಂಬದಲ್ಲಿ ಜನ ಜಾಸ್ತಿಯಾಯಿತು, ಪಾಲಾಗಬೇಕು, ಹೊಸ ರಾಣಿ ಬೇಕು ಎಂಬ ಸಣ್ಣ ಸೂಚನೆ.
ಮಳೆಗಾಲ ಶುರುವಾಗಿ, ಪ್ರಕೃತಿಯಲ್ಲಿ ಮಕರಂದದೂಟ ಕಡಿಮೆಯಾಗುತ್ತಿದ್ದಂತೆ ಕೆಲಸಗಾರರಿಗೆ ಗಂಡುಹುಳುಗಳ ಬಗ್ಗೆ ನಿರ್ಲಕ್ಷ್ಯ ಶುರು. ಬರೀ ತಿಂದು ತಿರುಗಾಡುವ ಈತ ಇದ್ದೂ ಪ್ರಯೋಜನವಿಲ್ಲ ಎಂದು ಗಂಡು ಹುಳುಗಳನ್ನು ಕೊಂದು ಬಿಡುತ್ತಾರೆ. ಆಹಾರ ಕೊಡದೆ ಮನೆಯಿಂದ ಹೊರಹಾಕುತ್ತಾರೆ. ಕುಟುಂಬಕ್ಕೆ ಗಂಡು ಅಗತ್ಯವಿದ್ದರೆ ಮಾತ್ರ ಬೇಕು.
🐝🐝🐝
Bee Bharath
https://prakrithifoods.com/all-products-2/